"ಹೇ! ನಿನಗೆ ಹೊಸ ವಿಷಯ ಗೊತ್ತಾಪ್ಪಾ" "ನೀನು ಬಂದಿದ್ಯಾ ಅಂದ್ರೆ ನನಗೆ ಗೊತ್ತಿಲ್ಲದ್ದು ನಿನಗೆ ಏನೋ ಗೊತ್ತಿದೆ ಅಂತಾಯ್ತು" "ನಿನ್ಗೆ ನಿಜವಾಗಲು ಗೊತ್ತಿಲ್ವಾಪ್ಪಾ" "ಅಯ್ಯೋ ರಾಮ. ಏನು ವಿಷಯ ಅಂತ ನನಗೆ ಗೊತ್ತಿಲ್ಲ ಕಣೋ. ಹೇಳಿ ಒಮ್ಮೆ ತೊಲಗು. ಕೆಲಸ ಇದೆ ಇಲ್ಲಿ" "ಯೇ, ನಂಗೊತ್ತಿಲ್ವಾ ನಿನ್ನ ಕೆಲಸ. ಆದ್ರೆ ವಿಷಯ ಸೀರಿಯಸ್ ಇದೆಯಪ್ಪಾ" "ಪೀಠಿಕೆ ಸಾಕು. ವಿಷಯಕ್ಕೆ ಬಾ" "ಹೇಳೇಬಿಡ್ಲಾ....ಕೇಳಿ ನೀನು ಸುಸ್ತಾಗ್ತೀಯಪ್ಪಾ.." "ಜಜ್ಜಿ ಹಾಕ್ತೀನಿ ನೋಡು ಈಗ ಬಾಯಿಬಿಡದಿದ್ರೆ" "ಕೋಪ ಬೇಡಪ್ಪಾ...ಕೇಳು ಹೊಸ ವಿಷಯ. ಬಾಸು....ರಾಜೀನಾಮೆ ಕೊಟ್ಟಿದ್ದಾರೆ" "ಏನು....?" "ಹೌದಪ್ಪಾ..ಬಾಸು ಇವತ್ತಿನಿಂದ ಕೆಲಸಕ್ಕೆ ಬರಲ್ಲ" "ಛೆ ಹೋಗೋ. ಹುಚ್ಚುಚ್ಚು ಮಾತಾಡ್ಬೇಡ. ಬಾಸ್ ಯಾಕೆ ಕೆಲಸ ಬಿಡ್ಬೇಕು" "ಆಯ್ತಪ್ಪಾ, ನನ್ನ ಮಾತಿನ ಮೇಲೆ ನಂಬಿಕೆ ಇಲ್ವಲ್ಲಾ ನಿಂಗೆ. ಹೋಗಿ ಅವರ ಕುರ್ಚಿ ನೋಡು" "ಲೇಟ್ ಬರಬಹುದು. ಅದಕ್ಕೆ ಈ ಸುದ್ದಿನಾ?" "ನೋಡಪ್ಪಾ ಅವರು ಯಾವತ್ತಾದರೂ ಲೇಟ್ ಬಂದಿದ್ದುಂಟಾ?" "ಏನೋ ಹುಷಾರಿಲ್ಲದೆ ಇರಬಹುದು. ಮದುವೆ, ಮುಂಜಿ ಯೇನಾದ್ರೂ....." "ಏ ನೀನು ಸುಮ್ಮನೆ ಗೊತ್ತಿಲ್ಲದವನ ಹಾಗೆ ಮಾತಾಡಬೇಡಪ್ಪಾ. ಅವರ ಮಗಳ ಮದುವೆಯನ್ನೇ ರಜಾ ದಿನದಲ್ಲಿ ಮಾಡಿದ್ದರು. ಗೊತ್ತಿಲ್ವಾ ನಿನಗೆ. ಇಲ್ಲಿಗೆ ಬರದೆ ಒಂದು ದಿನವಾದರೂ ಮನೇಲಿ ಬಾಸ್ ಯಾವತ್ತಾದರೂ ಕೂತಿದ್ದಾರಾ?" "ನಾನು ನೋಡಿದ ಹಾಗೆ...... ಇಲ್ಲ" "ಮತ್ತೆ ನಾನು ಏನು ಬಾಯಿ ಬಡಿತಿರೋದಪ್ಪಾ. ಬಾಸು ಪರ್ಮನೆಂಟಾಗಿ ಮನೆಗೆ ಹೋಗಿದ್ದಾರೆ" "ಆದ್ರೂ ನಂಬಕ್ಕಾಗೊಲ್ಲ. ಬಾಸ್ ರಾಜೀನಾಮೆ ಕೊಡ್ತಾರಾ" "ಕೊಟ್ಟಿದ್ದಾರೆ. ಅದಕ್ಕೇ ಇವತ್ತು ಈ ಕಡೆ ತಲೆ ಹಾಕಿಲ್ಲಪ್ಪಾ" "ಏ, ನೀನು ಹೇಳೋದು ಸತ್ಯ ತಾನೇ?" "ತೆಗೋಪ್ಪಾ. ನಾನ್ಯಾಕಪ್ಪಾ ಸುಳ್ಳು ಹೇಳ್ಲಿ. ನಂಬಿದ್ರೆ ನಂಬಪ್ಪಾ...ಇಲ್ಲದಿದ್ರೆ ನಿನ್ನಿಷ್ಟ" "ಆಯ್ತು ಬಾಸ್ ರಾಜೀನಾಮೆ ಕೊಟ್ಟಿದ್ದು ಸತ್ಯ ಅಂತ ಇಟ್ಕೋಳೋಣ. ಮುಂದೇನು" "ಅಂದ್ರೆ ಏನಪ್ಪಾ?" "ಅಂದ್ರೆ ಮುಂದೆ ನಮಗೆಲ್ಲಾ ಯಾರು ದಿಕ್ಕೂ ಅಂತ" "ಅಯ್ಯಾ, ನಿಂದೊಳ್ಳೆ ಆಯ್ತಲ್ಲಾ. ಹೊಸ ಬಾಸು ಬರ್ತಾರೆ ಅಷ್ಟೇ" "ಆದ್ರೂ ಬಾಸ್ ಅಂದ್ರೆ ಅವ್ರೇ ಕಣೋ. ಏನೊಳ್ಳೆಯವ್ರಾಗಿದ್ರು. ಛೇ! ಅವರ್ಯಾಕೆ ಹೋದ್ರು" "ನನಗೇನಪ್ಪಾ ಗೊತ್ತು. ಕಂಡುಹಿಡಿ ಮತ್ತೆ ನೋಡುವ" "ಹೊಸ ಬಾಸ್ ಏನಾದ್ರೂ ಬರ್ತಾರೇಂತ ಸುದ್ದಿ ಇದ್ಯಾ?" "ಹೋಗಪ್ಪಾ..ಈ ಬಾಸು ಹೋಗಿರೋದೇ ತುಂಬ ಜನಕ್ಕೆ ಗೊತ್ತಿಲ್ಲ. ಇನ್ನು ಹೊಸ ಬಾಸಿನ ಕತೆ ಯಾರಿಗೆ ತಾನೇ ಗೊತ್ತಿರುತ್ತೆ" ********************************************************************************* "ನಮಸ್ಕಾರಪ್ಪಾ....." "ಒಹೋ ಏನು ನಮ್ಮೆಡೆಗೆ ತಮ್ಮ ಪಾದ ಬೆಳೆದದ್ದು" "ಬಿಡಪ್ಪಾ ಸುಮ್ಮನೇ ತಮಾಷೆ ಮಾಡಬೇಡ ಸಣ್ಣವರ ಮೇಲೆ" "ಯಾರು..ಯಾರು ಸಣ್ಣವರು? ನೀವಾ? ಇಲ್ಲಿ ಆಗೋ ಪ್ರತಿಯೊಂದು ವಿಷಯ ಗೊತ್ತಾಗೋದೇ ನಿಮಗೆ. ನೀವು ಸಣ್ಣವರಾ? ಹಾಗಾದರೆ ನಾವೇನು?" "ಇರಲಿ ಬಿಡಪ್ಪಾ. ಬಾಸು ವಿಷಯ ಯಾಕೆ ಹೀಗಾಯ್ತು?" "ಏನು?...ಏನಾಯ್ತು?" "ಹೋಗಪ್ಪಾ. ಎಲ್ಲಾ ಗೊತ್ತಿದ್ದೂ ನಾಟಕ ಮಾಡ್ತೀಯ" "ಏನು ನಾಟಕ. ಬಾಸ್ ಹೋಗಿದ್ದಾರೆ ಅಂತ ಗೊತ್ತಲ್ವಾ ನಿಂಗೆ" "ಹೂಂ" "ಹಾಗಾದ್ರೆ ಅವ್ರು ಹೋಗಿದ್ದೂ ಯಾಕೆ ಅಂತ ಗೊತ್ತಿರಬೇಕಲ್ವಾ?" "ಇಲ್ಲಪ್ಪಾ...ಸಣ್ಣವರಿಗೆಲ್ಲಿ ಗೊತ್ತಾಗುತ್ತೆ ದೊಡ್ಡವರ ವಿಚಾರ" "ಬಲೇ ಕಿಲಾಡಿ ಕಣಯ್ಯಾ ನೀನು. ಎಲ್ಲಾ ನನ್ನ ಬಾಯಿಂದಲೇ ಕೇಳಬೇಕೂಂತಾನಾ?" "ಏನೋ ಬೇಸರ ಕಣಪ್ಪಾ. ಇಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡಿದ್ದಾರೆ ಬಾಸು. ಈಗ ಇದ್ದಕ್ಕಿದ್ದಂತೆ ಹೋದರೆ..ನಮಗೆ ಯಾಕೇಂತಾದ್ರೂ ಗೊತ್ತಾಗಬೇಕಲ್ವಾ?" "ನಮಗೆ ಅಂದರೆ....ಎಲ್ಲರಿಗೂ ನೀನೇನಾ ವಿಷಯ ಹಬ್ಬಿಸ್ತಾ ಇರೋದು?" "ಹೋಗಪ್ಪಾ ಸುಮ್ಮನೆ. ನಾನು ಹೇಳೋಕೆ ಮೊದಲೇ ಎಲ್ಲರಿಗೂ ಗೊತ್ತಿತ್ತು ಬಾಸು ಬಿಟ್ಟಿದ್ದಾರೆ ಅಂತ" "ನನ್ಗೆ ಒಂದು ವಿಷ್ಯ ಅರ್ಥ ಆಗೋದೇ ಇಲ್ಲ. ಇಲ್ಲಿ ಗುಟ್ಟಾದ ವಿಷ್ಯ ಇಲ್ಲರಿಗೂ ತಿಳಿದುಬಿಡುತ್ತೆ. ಅದೇ ಗೊತ್ತಿರಬೇಕಾದ್ದು ಯಾರಿಗೂ ಎಷ್ಟು ಹೇಳಿದ್ರೂ ನೆನಪಿರೊಲ್ಲಾ" "ಅದು ಹಾಗೇನೇ ಬಿಡಪ್ಪಾ. ಬಾಸು ಯಾಕೆ ಬಿಟ್ಟಿದ್ದು?" "ಅರೇ ನನನ್ನ ಯಾಕೆ ಕೇಳ್ತೀಯಾ? ಯಜಮಾನರನ್ನ ಕೇಳು" "ನೀನೂ ಒಳ್ಳೇ ಇದ್ದೀಯ ಬಿಡಪ್ಪಾ. ನಾನು ಯಜಮಾನರ ಮುಂದೆ ನಿಂತು ಕೇಳಕಾಗುತ್ತಾ?" "ನಿನ್ನ ಬಾಸ್ ಅಲ್ವಾ. ಕೇಳು ನೀನೇ" "ಯಜಮಾನರನ್ನ ಕೇಳೋದು, ನಿನ್ನ ಕೇಳೋದು, ಎರಡೂ ಒಂದೇ ಅಲ್ವೇನಪ್ಪಾ" "ಅರೆರೇ..ಏನು ನನ್ನನ್ನ ಹತ್ತಿಸ್ತಾ ಇದ್ದೀಯ" "ನಿನ್ನನ್ನ ಏನಪ್ಪಾ ಹತ್ಸೋದು? ನೀನಿರೋದೇ ಅಲ್ಲಿ ಮೇಲೆ. ನಮ್ಮೆಲ್ಲರಿಗಿಂತ ಮೇಲೆ" "ಓಹೋ ಈಗ ನೆನಪಿಗೆ ಬಂತಾ ನಿಮಗೆಲ್ಲಾ ನಾನು ಯಾರು ಅಂತ" "ನನಗಂತೂ ಮೊದಲಿನಿಂದಲೂ ನೀನು ಅಲ್ಲೇ ಇದ್ದೆ ಕಣಪ್ಪಾ" "ನಿನ್ನ ಬಾಸು ಹಾಗೇ ಯೋಚಿಸಿದ್ದರೆ ಇವತ್ತು ಅವನಿಗೆ ಈ ಪರಿಸ್ಥಿತಿ ಬರ್ತಾ ಇರ್ಲಿಲ್ಲ" "ಅಂದ್ರೆ" "ಅಂದ್ರೆ ನಿಮ್ಮ ಬಾಸು ತನ್ನನ್ನ ತಾನು ಏನು ಅಂದ್ಕೊಂಡಿದ್ದ ಅಂತ. ಅದಕ್ಕೇ ಯಜಮಾನರು ಅವನನ್ನ ಮನೆಗೆ ಕಳಿಸಿದರು" "ಹಾಗಾದ್ರೆ ಬಾಸು ರಾಜೀನಾಮೆ ಕೊಟ್ಟಿಲ್ವಾಪ್ಪಾ. ಅವರನ್ನ ತೆಗೆದು ಹಾಕಿದ್ರಾ?" "ಒಂಥರಾ ಹಾಗೇನೇ. ಆ ಮನುಷ್ಯ ತಲೆ ಗಟ್ಟಿ ಇದೆ ಅಂತ ಬಂಡೆಗೆ ಚಚ್ಚಲು ಹೋದ್ರು. ನಾವು ಬಿಡ್ತೀವಾ? ತಲೆ ಜೊತೆ ಅವನ ಪೂರ್ತಿ ದೇಹ ಚೂರು ಚೂರು ಮಾಡಿದ್ದೇವೆ" "ಏನಪ್ಪಾ ನೀನು ಹೇಳೋದು. ಒಂದೂ ಅರ್ಥ ಆಗ್ತಾ ಇಲ್ಲ" "ಏ! ಆ ನಿನ್ನ ಬಾಸ್ ಇದ್ದಾನಲ್ಲಾ. ಅವನಿಗೆ ಯಜಮಾನ್ರು ಹೇಳೀದ್ರು. ನೀನೇ ರಾಜೀನಾಮೆ ಕೊಡು. ಇಲ್ಲದಿದ್ದರೆ ನಾನೇ ತೆಗೆದು ಹಾಕ್ತೀನಿ ಅಂತ. ಬರೆದು ಹೋದ ನೆನ್ನೇನೇ. ಇನ್ನೇನು ಮಾಡ್ತಾನೆ? ಇನ್ನು ನಿನ್ನ ಬಾಸು ಈ ಕಡೆ ತಲೆ ಹಾಕೀನೂ ಮಲಗಲ್ಲ" "ಮತ್ತೆ ಪೀ.ಎಫೂ, ಅದೂ ಇದೂ ಅಂತ ಸೆಟ್ಲಮೆಂಟ್ ಇರುತ್ತಲ್ಲಪ್ಪಾ" "ಏನು...ಪೀ.ಎಫ್ಫಾ? ಅದನ್ನೆಲ್ಲಾ ನಾವೇ ಹಿಡಿದುಕೊಂಡಿದ್ದೇವೆ. ಏನು ಮಾಡಿದ್ದಾನೆ ಗೊತ್ತಾ ನಿನ್ನ ಬಾಸು. ರಾಶಿ ರಾಶಿ ದುಡ್ಡು ನುಂಗಿದ್ದಾನೆ. ಅದಕ್ಕೇ ಅವನ ಎಕೌಂಟೂ ಹಿಡಿದಿಟ್ಟಿದ್ದೇವೆ. ಅವನೇ ಯಜಮಾನ್ರಿಗೆ ಇನ್ನೂ ದುಡ್ಡು ಕೊಡಬೇಕು. ಅದಕ್ಕೇ ಹೇಳಿದ್ದು - ಅವನ ದೇಹವನ್ನೂ ಪುಡಿ ಪುಡಿ ಮಾಡಿದ್ದೇನೆ ಅಂತ" "ಏನು....ನಮ್ಮ ಬಾಸು ದುಡ್ಡು ತಿಂದಿದ್ದಾರಾ...ಇಲ್ಲಪ್ಪಾ...ನಾನು ನಂಬೊಲ್ಲಾ" "ಏ ಹೋಗೋ. ನೀನು ನಂಬಿದ್ರೆಷ್ಟು, ಬಿಟ್ರೆಷ್ಟು. ನಂಬಬೇಕಾದ ಯಜಮಾನರು ನಂಬಿಯಾಗಿದೆ. ನಿಮ್ಮ ಬಾಸಿಗೆ ತಕ್ಕ ಪಾಠ ಕಲಿಸಿಯೂ ಆಗಿದೆ" "ಛೇ! ಹೋಗ್ಲಿ ಬಿಡಪ್ಪಾ..ಈಗ ಮುಂದೇನು" "ಮುಂದ್ರೆ ಅಂದ್ರೆ...ಅವನ ಅಪ್ಪನಂತಾ ಬಾಸ್ ಬರ್ತಾರೆ ನಿನಗೆ ನಾಳೆಯಿಂದ" "ಅಂದ್ರೆ ಅಷ್ಟು ಬೇಗ ಹೊಸ ಬಾಸು ಸಿಕ್ಕಿದರಾ?" "ಬಾಸ್ ಅಂದ್ರೆ ಏನು ಆಕಾಶದಲ್ಲಿರ್ತಾರೇನೋ? ಕಾಸು ಸುರಿದ್ರೆ ಲೈನಲ್ಲಿ ನಿಲ್ತಾರೆ ನಿನ್ನ ಬಾಸುಗಳು" "ಆದ್ರೆ ಹಳೇ ಬಾಸಿನ ತರದವರು ಸಿಗಬೇಕಲ್ಲಪ್ಪಾ. ಅವರಷ್ಟು ಶ್ರದ್ಧೆ, ಅವರು ಗಳಿಸಿದ ಗೌರವ, ಅವರಿಗಿದ್ದ ವಿದ್ಯೆ..." "ಏ ನಿಲ್ಸೋ. ಏನು ನಿನ್ನ ಬಾಸ್ ಒಬ್ಬನೇನಾ ಸಾಚಾ ಇಲ್ಲಿ. ನಾವೆಲ್ಲಾ ಗತಿ ಇಲ್ಲದೇ ಬಿದ್ದವರಾ" "ನಾನೇನು ಹಾಗೆ ಹೇಳಿಲ್ಲಾಪ್ಪಾ...." "ಬಿಡು ಬಿಡು. ನೀವೆಲ್ಲಾ ಎಷ್ಟಾದರೂ ಅವನ ಪಾರ್ಟೀನೇ. ಇರಲಿ ಈ ಹೊಸ ಬಾಸ್ ಬಂದ ಮೇಲೆ ಇದೆ ನಿಮಗೆ ಶನಿಕಾಟ" "ಇರಲಿ ಬಿಡಪ್ಪಾ. ನಮಗೆ ಯಾರು ಬಾಸಾದರೇನು? ನಮ್ಮ ಕೆಲಸ ನಾವು ಮಾಡ್ಕೊಂಡಿರೋದು ಅಷ್ಟೇ. ತಿಂಗಳ ಕೊನೆಯಲ್ಲಿ ಸಂಬಳಕ್ಕೆ ಮೋಸ ಆಗದಿದ್ದರೆ ಆಯ್ತು ಅಷ್ಟೇ." "ಹಾಗೆ. ಹಾಗೆ ಸುಮ್ಮನಿದ್ದರೆ ನಿನ್ನ ಬಾಸ್ ಈಗ ಮನೆಯಲ್ಲಿ ಕೂರ್ತಾ ಇರ್ಲಿಲ್ಲ" "ಆಯ್ತಪ್ಪಾ. ನಾನಿನ್ನ ಬರಲಾ" "ಹೂಂ ಹೋಗು. ಎಲ್ಲರಿಗೂ ತಮಟೆ ಬಾರಿಸಿ ಹೇಳು. ಯಜಮಾನರ ದುಡ್ಡು ತಿಂದು ಓಡಿ ಹೋದ ನಿನ್ನ ಆ ಬಾಸ್ ಅಂತ. ಮತ್ತೆ ನಾಳೆ ಹೊಸ ಬಾಸ್ ಬರ್ತಾರೆ. ಅವರ ಜೊತೆ ಎಲ್ಲರಿಗೂ ಸರಿಯಾಗಿರಲು ಹೇಳು. ಇಲ್ಲದಿದ್ದರೆ ಎಲ್ಲರಿಗೂ ನಿನ್ನ ಬಾಸ್ ಗೆ ಆದ ಗತಿಯೇ ಆಗುತ್ತೆ. ನಿನಗೂ" **********************************************************************************
"ಹೋಗಿ ಬಂದ್ಯಾ. ಏನು ವಿಷಯಾಂತ ಗೊತ್ತಾಯ್ತ?" "ಹೋಗಪ್ಪಾ. ನೀವಲ್ಲಾ ಸೇರಿ ನನ್ನನ್ನೇ ಯಾವತ್ತು ಬಕರಾ ಮಾಡ್ತೀರಾ" "ಇರಲಿ ಬಿಡು. ಏನು ವಿಷಯ ಅಂತ ಹೇಳು. ಎಲ್ಲರೂ ಕಾಯ್ತಿದ್ದಾರೆ" "ಬಾಸನ್ನ ಯಜಮಾನರು ಬಯ್ದು ಮನೆಗೆ ಕಳಿಸಿದ್ರಂತೆ" "ನಾನು ಹೇಳ್ಲಿಲ್ವಾ ನಿಮಗೆಲ್ಲಾ. ಪಕ್ಕಾ ಇದೇ ಕೇಸೂಂತ. ಯಾರೂ ನಂಬ್ಲಿಲ್ಲ. ಈಗ ಕೇಳಿ" "ಏ ನೀನು ಸುಮ್ನಿರೋ. ಅವನು ಕತೆ ಹೇಳಿ ಮುಗಿಸಲಿ. ಆಮೇಲೆ ನಾನು ನಾವು ಡಿಸ್ಕಸ್ ಮಾಡೋಣ" "ನಮಗೇನು ಹಕ್ಕಿದೆ ಇಲ್ಲಿ ಅಂತ. ಡಿಸ್ಕಸ್ ಅಂತೆ ಡಿಸ್ಕಸ್" "ಹುಶ್!ಹುಶ್! ಯಾರೂ ಮಧ್ಯೆ ಮಾತಾಡಬೇಡಿ. ಅವನ ಕತೆ ಮುಗಿಯಲಿ ಮೊದಲು. ನೀನು ಹೇಳು, ಯಜಮಾನರು ಯಾಕಂತೆ ಬಾಸ್ ನ ಬಯ್ದಿದ್ದು" "ಏನೋಪ್ಪಾ. ನಮ್ಮ ಬಾಸು ದುಡ್ಡು ತಿಂದಿದ್ದಾರಂತೆ. ಅದು ಯಜಮಾನರಿಗೆ ಗೊತ್ತಾಯ್ತಂತೆ. ಅದಕ್ಕೇ ನೆನ್ನೆ ಬಯ್ದು ಕೆಲಸ ಬಿಡಿಸಿದರಂತೆ" "ಹಾಗಂತ ಆ ಚೇಲಾ ನಿನಗೆ ಹೇಳಿದ್ನಾ?" "ಹೇ ಸುಮ್ನಿರೂ. ಅವನು ಚೇಲಾ ಅಲ್ಲ. ಯಜಮಾನರ ಖಾಸಾ ಮಚ್ಚ" "ಈಗೀಗ ಯಜಮಾನರಿಗಿಂತ ಅವನದೇ ಜೋರು ದರ್ಬಾರಿಲ್ಲಿ" "ಅವನೇ ಒಂದು ದಿನ ಯಜಮಾನರನ್ನೂ ಓಡಿಸಿ ಅವರ ಕುರ್ಚಿಯಲ್ಲಿ ಕೂತ್ಕೋತಾನೆ" "ಹಾಗಾದರೆ ನಾವಲ್ಲಾ ಮನೆಗೆ ಗ್ಯಾರೆಂಟಿ" "ಅಂತಾ ಬಾಸ್ ನನ್ನೇ ಮನೆಗೆ ಕಳಿಸಿದ...ಪಾಪಿ...ನಮ್ಮನ್ನ ಬಿಡ್ತಾನಾ?" "ಅಲ್ಲಾ...ನಮ್ಮ ಬಾಸ್ ದುಡ್ಡು ತಿನ್ತಾರಾ?" "ಇಲ್ಲ" "ಇಲ್ಲವೇ ಇಲ್ಲ" "ಬಾಸ್ ಇಲ್ಲಿ ಸೇರಿ ಒಂದು ವರ್ಷಕ್ಕೆ ನಾನು ಇಲ್ಲಿಗೆ ಬಂದೆ. ನಾನು ಬಾಸ್ ನ ಸರಿಯಾಗಿ ಅರ್ಥ ಮಾಡಿಕೊಂಡು ಹೇಳ್ತೀನಿ - ಇದೆಲ್ಲಾ ಸುಳ್ಳು. ಆ ಚೇಲಾನೇ ಏನೋ ಮಾಡಿದ್ದಾನೆ. ಏಯ್. ಅವನು ನಮ್ಮ ಬಾಸ್ ಬಗ್ಗೆ ಇನ್ನೇನು ಹೇಳ್ದ?" "ಇನ್ನೇನು ಇಲ್ಲಪ್ಪಾ. ಅಷ್ಟೇ. ಬಾಸು ಹಣ ತಿಂದಿದ್ದಾರಂತೆ. ಅದಕ್ಕೇ ಅವರನ್ನ ಮನೆಗೆ ಕಳಿಸಿದ್ದಾರಂತೆ. ಬಾಸಿನ ಪಿ.ಎಫ್ ಎಲ್ಲಾ ಹಿಡಿದಿಟ್ಟಿದ್ದಾರಂತೆ, ಬಾಕಿ ವಸೂಲಿಗೆ" "ಮೈ ಗಾಡ್! ಬಾಸ್ ತಮ್ಮ ಮಗಳ ಮದುವೆ ಮುಗಿಸಿ ವರ್ಷವಾಗಿಲ್ಲ. ಭಯಂಕರ ಸಾಲ ಬೇರೆ ಮಾಡಿದ್ದಾರೆ. ಪಾಪ ಹೀಗೇನಾ ಅವರನ್ನ ನೋಡಿಕೊಳ್ಳೋದು ಇವರು" "ಇಲ್ಲಿ ಅವರ ಜೊತೆ ಮೊದಲಿನಿಂದಲೂ ಕೆಲಸ ಮಾಡ್ತಾ ಇದ್ದೀನಿ. ಮೊದಲಿದ್ದಿದ್ದು ನಾವಿಬ್ಬರೇ. ನನ್ನನ್ನ ಮನೆಗೆ ರಾತ್ರಿ ಕಳಿಸಿ ಬಾಸ್ ಮತ್ತೂ ಬಹಳ ಹೊತ್ತು ಕೆಲಸ ಮಾಡ್ತಾ ಇದ್ರು" "ಹೌದು. ನಾನು ಸೇರೋವಾಗ್ಲೂ ನನಗೆ ಅವರೇ ಎಲ್ಲಾ ಕೆಲಸ ಹೇಳ್ಕೊಟ್ಟಿದ್ರು" "ನಾನು ಅವರೂ ಮೊದಲ ವರ್ಷಗಳಲ್ಲಿ ಪಟ್ಟ ಪಾಡು ದೇವರಿಗೇ ಪ್ರೀತಿ" "ನನಗೆ ಗೊತ್ತಿರುವಂತೆ ಇಲ್ಲಿ ಲಾಭ ಜಾಸ್ತಿ ಆಗುವಂತೆ ಮಾಡಿದ್ದೇ ಬಾಸು" "ಹೌದು ನಾವು ಮೊದಲು ಬಂದಾಗ ಇಲ್ಲಿ ಏನಿತ್ತು. ಬಾಸ್ ತಮ್ಮ ಜೀವನವನ್ನೇ ಪಣ ಇಟ್ಟು ಲಾಭ ತಂದರು. ಈಗ...." "ಹೌದಪ್ಪಾ. ನಾನು ರಾತ್ರಿ ಇರ್ತೇನೆ ಅಂದ್ರೆ ನನ್ನನ್ನೂ ಮನೆಗೆ ಕಳಿಸಿ ಒಬ್ಬರೇ ಕೆಲಸ ಮಾಡ್ತಾ ಕೂತಿದ್ರು" "ಅವರು ಇಲ್ಲಿ ಮಾಡಿದ ಕೆಲಸಾನೇ ಬೇರೆ ಕಡೆ ಮಾಡಿದ್ರೆ...ರಾಜ..ರಾಜನ ತರ ಇರಬಹುದಿತ್ತು" "ಅವರಿಗೆ ಮೊದಲಿನಿಂದಲೂ ಸೆಂಟಿಮೆಂಟ್. ಯಾರೂ ಕೆಲಸ ಕೊಡದಾಗ ಯಜಮಾನರು ಕರೆದು ಕೆಲಸ ಕೊಟ್ರೂ ಅಂತ" "ಯಜಮಾನರು ದೇವರು ಬಿಡಿ" "ಹೌದು. ಯಜಮಾನರು ಒಳ್ಳೆಯವರೇ. ಅವರು ಈ ಚಿಲ್ಲರೆ ಮನುಷ್ಯನ ಮಾತು ಯಾಕೆ ನಂಬ್ತಾರೋ ಗೊತ್ತಿಲ್ಲ" "ನನಗೂ ಅದೇ ಸಂಶಯ. ಮೊದಲೆಲ್ಲಾ ಬಾಸ್ ಮತ್ತು ನಾನು ನೇರವಾಗಿ ಯಜಮಾನರನ್ನ ನೋಡ್ತಿದ್ದೆವು. ಈ ಮನುಷ್ಯ ಬಂದ ಮೇಲೆ ಯಜಮಾನರ ಮುಖ ನೋಡೋದೇ ಕಡಿಮೆ ಆಗಿದೆ" "ಹೌದು ನಮಗೆಲ್ಲಾ ಯಜಮಾನರ ಮುಖ ನೋಡಿದ್ದೇ ನೆನೆಪಿಲ್ಲ" "ಆ ಕಾಲದಲ್ಲಿ ನಾನೇ ಯಜಮಾನರಿಗೆ ಟೀ ಕೊಡ್ತಾ ಇದ್ದೆಪ್ಪಾ. ಮೊನ್ನೆ ಕಾಲು ನೋವು ಜಾಸ್ತಿಯಾಗಿ ಸ್ವಲ್ಪ ರಜಾ ಕೇಳೋಣಾಂತ ಅಂತ ಹೋದ್ರೆ ಬಿಡ್ಲಿಲ್ವಲ್ಲಪ್ಪಾ ಆ ಮನುಷ್ಯ" "ನೀನೇನು ಬಿಡು ಅವನ ಜೊತೆಗೂ ಹಾಯಾಗಿ ಮಾತಾಡ್ತೀಯಾ" "ನಾನೇನಪ್ಪಾ ಮಾಡಲಿ. ನಾನು ಯಾರನ್ನೂ ಬಿಡಕ್ಕಾಗೊಲ್ಲ" "ಹುಶ್...ಹುಶ್..ಪಾಪ ಅವನನ್ನ ಯಾಕೆ ಗೋಳು ಹೊಯ್ಕೋತೀರಾ? ಅವನ ವಿಷಯ ಬಿಡಿ. ಈಗ ಬಾಸ್ ನ ಮ್ಯಾಟರ್ ಏನು ಮಾಡೋಣ" "ಅದಕ್ಕಿಂತ ಮೊದಲು ನಮಗೆ ಸತ್ಯ ಏನೂಂತ ಗೊತ್ತಾಗ್ಬೇಕು" "ಏನು ಮಹಾ ಸತ್ಯ? ಯಾಕೆ ನೀವಲ್ಲಾ ಇಷ್ಟು ಇನೋಸೆಂಟ್ ಗಳ ತರಾ ಆಡ್ತೀರಾ?" "ಅಂದ್ರೆ" "ಅಂದ್ರೆ ನಿಮಗೂ ಗೊತ್ತಿದೆ, ನನಗೂ ಗೊತ್ತಿದೆ ಬಾಸ್ ಯಾಕೆ ಹೋದ್ರೂಂತ. ಮತ್ತೆ ಯಾಕೆ ಇಷ್ಟೆಲ್ಲಾ ರಾದ್ದಾಂತ" "ಇವತ್ತು ಬಾಸ್. ನಾಳೇ ನಾನು, ನೀನು ಯಾರಿಗಾದರೂ ಹೀಗೆ ಆಗಬಹುದು. ಅದಕ್ಕೆ" "ಅದಕ್ಕೆ...ಅದಕ್ಕೆ...ಏನು ಮಾಡಬೇಕೂಂತ ನಿನ್ನ ಮಾತು" "ನ್ಯಾಯ ಕೇಳೋಣ" "ಯಾರ ಹತ್ರ" "ಎನ್ಯಾರ ಹತ್ರ. ಯಜಮಾನರ ಬಳಿ ಹೋಗಿ ಕೇಳೋಣ" "ಏನೂಂತ ಕೇಳ್ತೀಯ?" "ಅರೇ! ಇದೊಳ್ಳೆ ಕತೆ ಆಯ್ತಲ್ಲಾ. ಬಾಸ್ ನ ಯಾಕೆ ತೆಗೆದ್ರಿ ಅಂತ ಕೇಳೋದು" "ಆಗ ಯಜಮಾನರು - ಇಲ್ಲ ಬಾಸ್ ರಾಜೀನಾಮೆ ಕೊಟ್ಟು ಹೋಗಿದ್ದಾರೆ ಅಂತ ಹೇಳ್ತಾರೆ. ಏನ್ಮಾಡ್ತೀಯ" "ಕಮಾನ್ ನಮಗೆಲ್ಲಾ ಗೊತ್ತು. ಅವರು ಬೇಕೂಂತ ರಾಜೀನಾಮೆ ಕೊಟ್ಟಿಲ್ಲ, ಬಲವಂತದಿಂದ ತೆಕೊಂಡಿದ್ದಾರೆ ಅಂತ" "ಹಾಗೇಂತ ನೀನು ಯಜಮಾನರ ಮುಂದೆ ಹೇಳ್ತೀಯಾ" "ನಾನೊಬ್ಬ ಯಾಕೆ...ನಾವೆಲ್ಲಾ ಸೇರಿ ಕೇಳೋಣ" "ಸ್ವಲ್ಪ ಸುಮ್ಮನಿರ್ತೀಯಾ. ಯಾರು ಬರ್ತಾರೆ ಸ್ವಲ್ಪ ಕೇಳು" "ಯಾಕೆ ಸಂಶಯ. ಬಾಸ್ ಇಲ್ಲಿ ತುಂಬಾ ವರ್ಷದಿಂದ ದುಡ್ದಿದ್ದಾರೆ. ನಮಗೆಲ್ಲಾ ಕೆಲಸ ಕಲಿಸಿಕೊಟ್ಟಿದ್ದಾರೆ. ನಮ್ಮೆಲ್ಲರಿಗೂ ಒಂದಲ್ಲಾ ಒಂದು ತರದಲ್ಲಿ ಸಹಾಯಾನೂ ಮಾಡಿದ್ದಾರೆ" "ಹೌದು. ನಾನು ಇಲ್ಲಾ ಅಂತ ಹೇಳಲ್ಲ. ಆದರೆ ಈ ಸಮಯದಲ್ಲಿ ಅದೆಲ್ಲಾ ಮುಖ್ಯ ಅಲ್ಲ. ಅವರು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಅಷ್ಟೇ" "ಹಾಗಾದರೆ ನೀನು ಹೇಳೋದು ನಾನು ಹೀಗೆ ಸುಮ್ಮನಿರಬೇಕೂಂತಲಾ?" "ಇನ್ನೇನೂ ನಾವು ಮಾಡಕ್ಕೇ ಆಗೊಲ್ಲಾ" "ನಾನು ಒಪ್ಪಲ್ಲ. ನಾನು ಯಜಮಾನರನ್ನ ಹೋಗಿ ಕೇಳಲೇ ಬೇಕು" "ಏಯ್ ನಿನಗೆ ನಾನು ಹೇಳ್ತಾ ಇರೋದು ಅರ್ಥ ಆಗ್ತಾ ಇಲ್ವಾ? ಇಲ್ಲಿ ನಮಗೆಲ್ಲಾ ಬಾಸ್ ಬಗ್ಗೆ ಗೌರವ ಇದೆ. ಆದರೆ ಈಗ ನಾವೇನೂ ಮಾಡೊಕ್ಕಾಗಲ್ಲ" "ಇಲ್ಲ. ನಾನು ಯಜಮಾನರ ಹತ್ರ ಹೋಗ್ತೇನೆ. ನಂಗೊತ್ತು, ನನ್ನ ಜೊತೆ ಇವರೆಲ್ಲಾ ಬರ್ತಾರೆ. ನೀನೂ ಬರ್ತೀಯಾ. ನಾವೆಲ್ಲಾ ಸೇರಿ ಕೇಳೋಣ ಯಜಮಾನರನ್ನ - ಇದು ನ್ಯಾಯಾನಾ ಅಂತ" "ನಿನಗೆ ಎಷ್ಟು ಹೇಳಿದ್ರು ಅಷ್ಟೇ. ಆಯ್ತು ಕೇಳಿ ನೋಡು. ನಿನ್ನ ಜೊತೆ ಬರೋಕೆ ಯಾರ್‍ಯಾರು ತಯಾರಿದ್ದಾರೆ ಅಂತ" "ಅದನ್ನೇನು ಕೇಳೋದು. ಎಲ್ಲಾರೂ ಬರ್‍ತಾರೆ ಅಷ್ಟೇ" "ಹಾಗಾದರೆ ನಾನೇ ಕೇಳ್ತೀನಿ. ನೋಡೀಪ್ಪಾ ನೀವೀಗ ಯಜಮಾನರ ಜೊತೆ ಹೋಗೋಕೆ ತಯಾರಿದ್ದೀರಾ?" "....." "........" ".................." "........" "....." "ನೋಡೋ...ನೋಡೋ...ಇಷ್ಟೇ...ಹೋಗಲಿ ಬಿಡು ನಾನು ಬರ್‍ತೀನಿ. ನೀನು ಯಜಮಾನರ ಹತ್ರ ವಿಷ್ಯ ಹೀಗೆ ಹೀಗೆ ಅಂತ ಹೇಳ್ತೀಯಾ" "ಓಹೋ. ಅದರಲ್ಲೇನಂತೆ" "ನೋಡು ನೀನು ಅಲ್ಲಿಗೆ ಹೋದರೆ ಆ ಮನುಷ್ಯನ ಕೆಟ್ಟ ದೃಷ್ಟಿ ನಿನ್ನ ಮೇಲೂ ಬೀಳುತ್ತೆ. ಮತ್ತೆ ನೀನೂ ಮನೆಗೆ ಹೋಗ್ತೀಯ ಅಷ್ಟೇ" "ಹೋಗೋ ಹಾಗೇನು ಆಗೊಲ್ಲ" "ಏಯ್ ಯಾವ ಲೋಕದಲ್ಲಿ ಇದ್ದೀಯ ನೀನು. ಅಂತಾ ಬಾಸ್ ನನ್ನೇ ಮನೆಗೆ ಕಳಿಸಿದ್ರು. ನಿನಗೆ ಅವರ ಅನುಭವದಷ್ಟು ವಯಸ್ಸಾಗಿಲ್ಲ. ನೀನ್ಯಾವ ಲೆಕ್ಕ ಇಲ್ಲಿ" "ಅಂದ್ರೆ ನಾನು ಸುಮ್ಮನೇ ಕೂತಿರ್‍ಬೇಕಾ. ಇಷ್ಟೆಲ್ಲಾ ಅನ್ಯಾಯ ಆಗ್ತಿದೆ ಇಲ್ಲಿ..ಆದ್ರೂ.." "ಶ್!!ಶ್!! ಒಳ್ಳೇ ಮಗು ತರಾ ಮಾತಾಡ್ತೀಯಪ್ಪಾ ನೀನು. ಪ್ರಪಂಚದ ತಿಳುವಳಿಕೇನೇ ಇಲ್ಲ ನಿನಗೆ. ನೋಡೋ ಹಳೇ ಬಾಸ್ ಒಳ್ಳೇಯವರು. ಅವರಿಂದ ನಾವು ಬೇಕಾದಷ್ಟು ಕಲಿತೆವು. ಅಷ್ಟೇ ಬಿಡು. ನಾಳೆ ಹೊಸ ಬಾಸ್ ಬರ್‍ತಾರೆ. ಅಷ್ಟೇ" "ಹೊಸ ಬಾಸ್ ಹಳೇ ಬಾಸ್ ನ ಹಾಗೆ ಇಲ್ಲಾಂದ್ರೆ?" "ಖಂಡಿತ ಹೇಳ್ತೀನಿ ಕೇಳು. ಹಳೇ ಬಾಸ್ ನ ಹಾಗೆ ನಮೆಗೆ ಇನ್ಯಾರೂ ಸಿಗೊಲ್ಲ. ಆದ್ರೆ ಹೊಸ ಬಾಸ್ ನಿಂದಾನೂ ಏನಾದ್ರೂ ಕಲಿಯೋದು ಇರುತ್ತೆ. ಅವರು ಒಳ್ಳೆಯವರಲ್ಲ ಅಂತಾ ಈಗಲೇ ಹೇಗೆ ಹೇಳ್ತೀಯಾ. ನೋಡೋಣ" "ಏನಾದ್ರೂ...." "ಏಯ್! ಒಳ್ಳೇವರಿಂದ ಮಾತ್ರೆನೇ ಕಲಿಯೋದಲ್ಲಾ ಕಣೋ. ಕೆಟ್ಟವರಿಂದನೂ ಕಲೀಬೇಕು. ಕೆಟ್ಟವರನ್ನ ನೋಡಿ ಹೀಗಿರಬಾರದು ಅಂತ ಕಲೀಬೇಕು. ಒಳ್ಳೆಯವರನ್ನ ನೋಡಿ ಹೇಗಿರಬೇಕು ಅಂತ ಕಲೀತಿವಲ್ಲಾ, ಹಾಗೆ" "ನೀನೆನಪ್ಪಾ ಅಂದ್ರೆ......ಸುಮ್ನೆ...ಬಂದಿದೆಲ್ಲಾ ಇರ್‍ಲಿ ಅಂತಾ....." "ವಿಷಾನೂ ಕುಡಿತೀನಿ ಅಂತಾನಾ. ಹಾಗಲ್ಲ ಅದು. ಇರ್‍ಲಿ ಬಿಡು. ನಾಳೆ ಹೊಸ ಬಾಸ್ ಬರ್‍ತಾರೆ. ಅದಕ್ಕೆಲ್ಲಾ ರೆಡಿ ಮಾಡೋಣಪ್ಪಾ ಮತ್ತೆ" "ಏನಪ್ಪಾ ಯಾವ ಹಾರ ತರೋಣ ನಾಳೆ ಹೊಸ ಬಾಸಿಗೆ......" ***************************************************************************** |